ಸಿಂದಗಿ ಶಾಂತವೀರ ಶ್ರೀಗಳ ಚರಿತ್ರೆ

#ಪೂಜ್ಯ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಜೀವನ ಚರಿತ್ರೆ#

ಪೂರ್ವಜರ ಇತಿಹಾಸ ಭಾಗ -೧

ಕಲಬುರ್ಗಿ ಜಿಲ್ಲೆಯ ಯಾತನೂರು ಒಂದು ಪುಟ್ಟಹಳ್ಳಿ, ಅದು ೧೯ನೆಯ ಶತಮಾನದ ಪ್ರಾರಂಭದ ಕಾಲ. ನಾಗರಿಕ ಸೌಲಭ್ಯಗಳು ಹೋಗಲಿ ಹಾಗೆಂದರೇನೆಂದೇ ತಿಳಿಯದ ಕಾಲ, ಸಮಸ್ತ ಗ್ರಾಮವೇ ಒಂದು ಕುಟುಂಬ ವೆಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ಸಮಯವದು.

ಯಾವ ಪುಣ್ಯಾತ್ಮ ಹೆಸರಿಟ್ಟನೋ ಅದಕ್ಕೆ ಯಾತನೂರು ಎಂದು. ಬಹುಪಾಲು ಲಿಂಗಾಯತ ಕುಟುಂಬಗಳೇ ವಾಸವಾಗಿದ್ದ ಆ ಪುಟ್ಟಗ್ರಾಮ ಸದಾ ಬಡತನದ ಯಾತನೆಯಲ್ಲಿ ನರಳುತ್ತಿದ್ದ ಯಾತನೆಯ ಊರೇ ಆಗಿತ್ತು, ಅಲ್ಲಿ ನೆಲೆ ನಿಂತಿದ್ದ ಚೆನ್ನಯ್ಯ ಮತ್ತು ಶಿವಲಿಂಗವ್ವ ಎಂಬ ಜಂಗಮ ದಂಪತಿಗಳು ಗ್ರಾಮದ ಸಮಸ್ತ ಲಿಂಗಾಯತ ಮನೆತನಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳ ಜೀವನಾಡಿಯಾಗಿದ್ದರು. ‘ಅಯ್ಯಾಚಾರ, ಮದುವೆ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳು ಚೆನ್ನಯ್ಯನವರ ಆಣತಿಯಂತೆ ನೆರವೇರುತ್ತಿದ್ದರೆ, ಮಗುವನ್ನು ತೊಟ್ಟಿಲಲ್ಲಿ ಹಾಕುವುದು, ಹೆಣ್ಣನ್ನು ಮನೆ ತುಂಬಿಸಿಕೊಳ್ಳುವುದು, ಸೋಬಾನ ಮುಂತಾದ ಕಾರ್ಯಕ್ರಮಕ್ಕೆ ಶಿವಲಿಂಗವ್ವನದೇ ಹಿರಿಯತನ. ಗ್ರಾಮದ ತಂದೆ ತಾಯಿಗಳಂತಿದ್ದ ಆ ದಂಪತಿಗಳಿಗೆ ಇಬ್ಬರು ಮಕ್ಕಳು ಹಿರಿಯವ ವೀರಯ್ಯ, ನಂತರದವ ಸಿದ್ದಯ್ಯ.

ಅವು ಬರಗಾಲದ ದಿನಗಳು, ನಿರಂತರ ಮೂರು ವರ್ಷಗಳಿ೦ದ ಕಾಡುತ್ತಿದ್ದ ಬರಗಾಲದಿಂದ ಯಾತನೂರು ತತ್ತರಿಸಿತ್ತು. ಸಂಪತ್ತಿಗೆ ಬಡತನ ವಿರಬಹುದು, ಆದರೆ ಭಕ್ತಿಗೆ ಬಡತನವುಂಟೆ? ದಾರಿದ್ರದಲ್ಲೂ ಯಾತನೂರಿನ ಜನ ಚೆನ್ನಯ್ಯ, ವೀರಯ್ಯ, ಸಿದ್ದಯ್ಯನವರನ್ನು ತಮ್ಮ ಮನೆಗೆ ಪೂಜೆಗಾಗಿ ಬಿನ್ನವಿಸಿಕೊಳ್ಳುತ್ತಿದ್ದರು. ಕುಟುಂಬದ ಮೂವರು ಸದಸ್ಯರ ಪ್ರಸಾದ ಭಕ್ತರ ಮನೆಯಲ್ಲೇ ಆಗುತ್ತಿತ್ತು, ಆದರೆ ತುಂಬ ಸಂಕೋಚ ಸ್ವಭಾವದ ಚೆನ್ನಯ್ಯನವರಿಗೆ ಇದರಿಂದ ಸಮಾಧಾನವನಿಸುತ್ತಿರಲಿಲ್ಲ, ‘ಜನರೇ ತುತ್ತಿಗಾಗಿ ತತ್ವಾರ ಪಡುತ್ತಿರುವಾಗ ನಾವು ಮತ್ತೆ ಮೂವರು ಅವರಿಗೆ ಹೊರೆಯಾಗಲಿಕ್ಕಿಲ್ಲವೆ? ಅವರೇನೋ ಶಿವನಿಗೆ ಪ್ರಸಾದ ಎಂಬ ಭಾವದಿಂದಲೇ ನಮಗೆ ಎಡೆ ಮಾಡುತ್ತಾರೆ. ಆ ಶ್ರದ್ಧೆಯನ್ನೆ ಬಂಡವಾಳವಾಗಿಟ್ಟುಕೊಂಡು ಅವರ ಮಕ್ಕಳ ತುತ್ತಿನಲ್ಲಿ ಪಾಲು ಪಡೆಯುವುದು ತಪ್ಪಲ್ಲವೆ? ಆದರೆ ಅವರಾಗಿ ಕರೆದಾಗ ಪೂಜೆ- ಪ್ರಸಾದ ತಪ್ಪಿಸುವಂತೆಯೂ ಇಲ್ಲ. ಜನ ನೊಂದುಕೊಳ್ಳುತ್ತಾರೆ’ ಎಂದಲ್ಲ ಚಿಂತಿಸಿದ ಮೃದು ಸ್ವಭಾವದ ಚೆನ್ನಯ್ಯ ದಾರಿಯೊಂದನ್ನು ಕಂಡುಕೊಂಡರು. ಯಾತನೂರನ್ನು ಬಿಟ್ಟು ಬೇರೆಡೆಗೆ ಹೋಗುವುದು, ತಮ್ಮ ಯೋಚನೆಯನ್ನು ಧರ್ಮಪತ್ನಿ ಶಿವಲಿಂಗವ್ವನಿಗೆ ತಿಳಿಸಿದರು. ಪತಿಯ ಯಾವ ಮಾತಿಗೂ ಎದುರಾಡದ ಆ ತಾಯಿ ಮೌನದಿಂದಲೇ ಸಮ್ಮತಿ ಸೂಚಿಸಿದರು.

ಚೆನ್ನಯ್ಯನವರ ನಿರ್ಧಾರ ಗಟ್ಟಿಯಾಗುವುದೇ ತಡ ಗ್ರಾಮದ ಕೊಡ-ತೆಗೆದುಕೊಳ್ಳುವ ವ್ಯವಹಾರಗಳನ್ನೆಲ್ಲ ಮುಗಿಸಿದರು. ಯಾರು ಯಾರಿಂದ ಹಣ ಪಡೆದಿದ್ದರೂ ಅವರಿಗೆ ಅದನ್ನು ಮರಳಿಸಿದರು. ಆದರೆ ತಾವು ನೀಡಿದ ಹಣ ಮರಳಿ ಪಡೆಯುವ ಗೋಜಿಗೆ ಹೋಗಲಿಲ್ಲ. ಯಾಕೆಂದರೆ ಕೊಡುವ ಸ್ಥಿತಿಯಲ್ಲಿ ಅವರಿಲ್ಲ ಎಂಬುದು ಗೊತ್ತಿತ್ತು ಎಲ್ಲ ಮುಗಿದ ಮೇಲೆ ಒಂದು ದಿನ ನಸುಕಿನಲ್ಲಿ ಮನೆಯ ಸಾಮಾನುಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಯಾತನೂರಿನ ನೆಲಕ್ಕೆ ಕೈ ಮುಟ್ಟಿ ನಮಸ್ಕರಿಸಿ, ನಾಲ್ಕೂ ಜನ ಊರು ತೊರೆದು ನಡೆದೇ ಬಿಟ್ಟರು. ಸೂರ್ಯ ಉದಯಿಸಿರಲಿಲ್ಲ, ಹಕ್ಕಿಯ ಕಲರವ ಪ್ರಾರಂಭ ವಾಗಿರಲಿಲ್ಲ, ಬೆಳಗಿನ ಕುಳಿರ್ಗಾಳಿಗೆ ಮೈಯೊಡ್ಡಿ ಒಬ್ಬರ ಹಿಂದೆ ಒಬ್ಬರಂತೆ ನಾಲ್ವರೂ ನೆರಳಿನಂತೆ ಮೌನವಾಗಿ ನಡೆದು ಹೊರಟರು.

ಹೀಗೆ ಹೊರಟವರು ಬಂದು ತಲುಪಿದ್ದು ಸಿಂದಗಿ ತಾಲೂಕಿನ ಕುಮಸಗಿ ಗ್ರಾಮಕ್ಕೆ, ಚೆನ್ನಯ್ಯನವರು ಯಾತನೂರನ್ನು ಬಿಡುವ ಮೊದಲೇ ನಿರ್ಧರಿಸಿದ್ದರು, ಭೀಮಾತೀರದ ಕುಮಸಗಿಗೆ ಹೋಗಬೇಕು, ಅಲ್ಲಿ ಪಾಳು ಬಿದ್ದಿರುವ ತಮ್ಮ ಪೂರ್ವಜರ ಮಠವನ್ನು ದುರಸ್ತಿಗೊಳಿಸಬೇಕು, ಅಲ್ಲಿಯೇ ನೆಲೆ ನಿಲ್ಲಬೇಕು ಎಂದು.

……###ಮುಂದುವರಿಯುದು

Leave a Reply

Shopping cart

0
image/svg+xml

No products in the cart.

Continue Shopping